ಕರ್ನಾಟಕಕ್ಕೆ ಎರಡು ದೈತ್ಯ ಕಂಪನಿಗಳಿಂದ Rs. 300 ಕೋಟಿ ಹೂಡಿಕೆ ಹರಿದು ಬರಲಿದೆ : M B ಪಾಟೀಲ್
ಕರ್ನಾಟಕ ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಮುಂಬೈನಲ್ಲಿ ನಡೆದ ಎರಡು ದಿನ ರೋಡ್‌ಶೋ ಮತ್ತು ಪ್ರಮುಖ ಸಭೆಗಳು ಯಶಸ್ವಿಯಾಗಿವೆ. ಔಷಧ ತಯಾರಿಕೆಗೆ ಹೆಸರಾಗಿರುವ ಸಿಪ್ಲಾ ಕಂಪನಿ ಮತ್ತು ರಾಕೆಟ್ ಇಂಡಿಯಾ ಕಂಪನಿಗಳಿಂದ ರಾಜ್ಯದಲ್ಲಿ 300 ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.
ಸಚಿವರು ಬ್ಲ್ಯಾಕ್ ಸ್ಟೋನ್, ಸೇಂಟ್ ಗೋಬಿಯನ್, ಹೊರೈಝಾನ್, ಹೆನ್ಕೆಲ್, ಕೆಇಸಿ ಇಂಟರ್ನ್ಯಾಷನಲ್, ಐಡಿಯಾ ಫೋರ್ಜ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಹಿತಿ ನೀಡಿದ ಸಚಿವರು, ಔಷಧ ತಯಾರಿಕೆಗೆ ಹೆಸರಾಗಿರುವ ಸಿಪ್ಲಾ ಕಂಪನಿಯು ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ತನ್ನ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ 200 ಕೋಟಿ ರೂಪಾಯಿ ಮತ್ತು ಗಿಡಮೂಲಿಕೆ ಆಧಾರಿತ ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಸ್ಥಾವರ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿವೆ ಎಂದು ಹೇಳಿದರು.
ಬ್ಲ್ಯಾಕ್ ಸ್ಟೋನ್ ಕಂಪನಿಯು ರಾಜ್ಯದಲ್ಲಿ ಡೇಟಾ ಸೆಂಟರ್, ಮರುಬಳಕೆ ಇಂಧನ ಮತ್ತು ಫೈಬರ್ ಆಪ್ಟಿಕ್ ವಲಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆ ಮಾಡಲು ಬಯಸಿದೆ. ಗಾಜು ಮತ್ತಿತರ ವಸ್ತುಗಳ ತಯಾರಿಕೆಗೆ ಹೆಸರಾಗಿರುವ ಸೇಂಟ್ ಗೋಬಿಯನ್ ಕಂಪನಿಯು ರಾಜ್ಯದಲ್ಲಿ ತನ್ನ ತಯಾರಿಕಾ ಸೌಲಭ್ಯದ ವಿಸ್ತರಣೆಗೆ ಮುಂದಾಗಿದೆ. ಇದಕ್ಕೆ ಬೇಕಾದ ಅಗತ್ಯ ಭೂಮಿ ಎಲ್ಲೆಲ್ಲಿದೆ ಎಂದು ತಿಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೊರೈಝಾನ್ ಕಂಪನಿಗೆ ರಾಜ್ಯದ 2ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವಂತೆ ಕೇಳಲಾಗಿದೆ. ಅದು ಬಳಸಲು ಸಿದ್ಧವಾಗಿರುವ ಮತ್ತು ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿ ಈ ಕೆಲಸ ಮಾಡಬಯಸಿದೆ. ಇದರಿಂದ ರಾಜ್ಯವು ಕೈಗಾರಿಕಾ ಪ್ರಗತಿಯಲ್ಲಿ ಪ್ರಾದೇಶಿಕ ಸಮಾನತೆ ಸಾಧಿಸಬಹುದು ಎಂದರು. ನೆನ್ನೆ ಮಂಗಳವಾರ ನಡೆದ ಸಭೆಯಲ್ಲಿ ರೇಮಂಡ್, ಬಿಸ್ಲೆರಿ, ಟಾರ್ಕ್ ಸಹಿತ ಅಂತಾರಾಷ್ಟ್ರೀಯ 10 ಕಂಪನಿಗಳ ಜತೆ ಸಚಿವರು ಮಾತುಕತೆ ನಡೆಸಿದರು.
ಜಿಂದಾಲ್ ಕಂಪನಿಯಿಂದ 5 ವರ್ಷದಲ್ಲಿ 1.20 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಬಿಸ್ಲೆರಿ ಕಂಪನಿಯು ರಾಜ್ಯದಲ್ಲಿ ಅಭಿವೃದ್ಧಿ ವಿಸ್ತರಣೆಗೆ ಮುಂದಾಗಿದೆ. ವಿಜಯಪುರ ಮತ್ತು ಚಾಮರಾಜನಗರದಲ್ಲಿ ಘಟಕ ಸ್ಥಾಪನೆಗೆ ಕೋರಲಾಗಿದೆ. ಇದಾದಲ್ಲಿ ಸುಮಾರು ಎರಡು ಸಾವಿರ ಉದ್ಯೋಗಗಳು ಲಭಿಸಲಿವೆ. ಇನ್ನೂ ರೇಮಂಡ್ ಲೈಫ್ ಸ್ಟೈಲ್ ಕಂಪನಿಗೆ ಹೂಡಿಕೆಗೆ ಆಸಕ್ತಿ ಹೊಂದಿದ್ದು, ರಾಜ್ಯದ ಬಳ್ಳಾರಿ ಅಥವಾ ವಿಜಯಪುರ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಶೀಘ್ರವೇ ಇದೆಲ್ಲದ ಕುರಿತು ಅಪ್ಡೇಟ್ ಸಿಗಲಿದೆ.