ಆದರ್ಶ ವ್ಯಕ್ತಿಗಳು

ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೆ. ಪಿ. ಶಿವಸ್ವಾಮಿಯವರು ಇಂದು ನಮ್ಮೊಂದಿಗಿದ್ದಾರೆ.

News Desk· 5 min read
ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೆ. ಪಿ. ಶಿವಸ್ವಾಮಿಯವರು ಇಂದು ನಮ್ಮೊಂದಿಗಿದ್ದಾರೆ.

ನಮ್ಮ ಸಮಾಜದ ಓರ್ವ ಹಿರಿಯ ಸಾಧಕರನ್ನು ನಿಮಗೆ ಪರಿಚಯ ಮಾಡಲಿದ್ದೇವೆ.

ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಈ ಮಹನೀಯರು ಕೇಂದ್ರ ಸರ್ಕಾರದ ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಶ್ರೀ ಕೆ. ಪಿ. ಶಿವಸ್ವಾಮಿಯವರು ಇಂದು ನಮ್ಮೊಂದಿಗಿದ್ದಾರೆ.

S2S.jpeg

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿ ಗ್ರಾಮದಲ್ಲಿ ಜನಿಸಿದ ಶಿವಸ್ವಾಮಿಯವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹಳೇಕೋಟೆ ಮತ್ತು ಶೆಟ್ಟಿಹಳ್ಳಿಯಲ್ಲಿ ಮುಗಿಸಿದರು.ಪ್ರೌಢಶಾಲಾಶಿಕ್ಷಣ ಆಲೂರಿನಲ್ಲಿ ನಡೆಯಿತು.

ಪಿಯುಸಿ ಮತ್ತು ಪದವಿ ಹಾಸನದಲ್ಲಾಯಿತು.ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಶಿವಸ್ವಾಮಿಯವರು ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ಸೇವೆಗೆ ಸೇರಿ 39 ವರ್ಷಗಳ ಕಾಲ ಸಮರ್ಥ ಸೇವೆ ಸಲ್ಲಿಸಿ ಹಿರಿಯ ಅಧೀಕ್ಷಕರ ಹುದ್ದೆಯಲ್ಲಿ ನಿವೃತ್ತರಾದರು.

S3.jpeg

ಈ ತಿಂಗಳಲ್ಲಿ ಇವರ ಸಂದರ್ಶನ ಪ್ರಸಾರಕ್ಕೆ ಮತ್ತೊಂದು ಕಾರಣವಿದೆ.

ಅವರು ಕೇಂದ್ರೀಯ ಸದನದ ಕನ್ನಡ ರಾಜ್ಯೋತ್ಸವ ರೂವಾರಿಗಳಲ್ಲೊಬ್ಬರು.

ಕೇಂದ್ರೀಯ ಸದನದ ನೌಕರರ ಸಾಂಗತ್ಯ ಸದನ ಕನ್ನಡ ಸಂಘ ಸ್ಥಾಪಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಾರಂಭಿಸಿದರಲ್ಲದೆ ನಿವೃತ್ತಿಯ ಬಳಿಕವೂ ಈ ವರೆಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಅವರ ಭಾಷಾಭಿಮಾನದ ಸಂಕೇತ.

S9.jpeg

ವಿದ್ಯಾಪೀಠ ವಾರ್ಡಿನ ರಾಜ್ಯೋತ್ಸವ ಸಮಾರಂಭದಲ್ಲೂ 80ರ ಹಿರಿಯ ಶಿವಸ್ವಾಮಿಯವರು ಸಕ್ರಿಯರಾಗಿರುವುದು ಯುವಕರನ್ನು ನಾಚಿಸುತ್ತದೆ.

ಶಂಕರ್ ನಾಗ್ ಜನ್ಮದಿನದಂದು ನಾಗ್ ವೃತ್ತದಲ್ಲಿ ಆಚರಿಸುವ ಸಮಾರಂಭದಲ್ಲೂ ಶಿವಸ್ವಾಮಿಯವರು ಉತ್ಸಾಹದಿಂದ ಭಾಗವಹಿಸುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಶಿವಸ್ವಾಮಿಯವರು ತಮ್ಮ ಕುಟುಂಬದ ಸದಸ್ಯರೆಲ್ಲರನ್ನೂ ಪರಿಷತ್ತಿನ ಸದಸ್ಯರಾಗಿಸಿದ್ದಾರಲ್ಲದೆ

S7.jpeg

ಅನೇಕ ಸಾರ್ವಜನಿಕರನ್ನೂ ಪರಿಷತ್ತಿನ ಸದಸ್ಯತ್ವ ಕೊಡಿಸಿದ್ದಾರೆ.

ಇನ್ನಿತರ ಹಲವಾರು ಕನ್ನಡ ಸಂಘಸಂಸ್ಥೆಗಳೊಂದಿಗೂ ಅವರಿಗೆ ನಿಕಟ ಒಡನಾಟವಿದೆ.

ಸ್ಥಗಿತಗೊಂಡಿದ್ದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ಕೊ ಆಪರೇಟಿವ್ ಸೊಸೈಟಿಯ 22 ವರ್ಷಗಳ ಲೆಕ್ಕ ಪರಿಶೋಧನೆ ಮಾಡಿಸಿ ಪುನರಾರಂಭಿಸಿ 24% ಲಾಭಾಂಶ ತಂದುಕೊಟ್ಟ ಕೀರ್ತಿ ಶಿವಸ್ವಾಮಿಯವರದಾಗಿದೆ.

S12.jpeg

ಕೇಂದ್ರೀಯ ಸದನ ಬಳಕೆದಾರರ ಸಂಘದ ಸ್ಥಾಪಕ ನಿರ್ದೇಶಕರಾಗಿಯೂ ಮಹತ್ತರ ಸೇವೆ ಸಲ್ಲಿಸಿದ್ದಾರೆ.

ಯಶಸ್ವೀ ಕಾರ್ಯನಿರ್ವಹಣೆಯೊಂದಿಗೆ ಸೇವಾವಧಿಯಲ್ಲಿ ಉತ್ತಮ ಹೆಸರು ಗಳಿಸಿ 2006ರಲ್ಲಿ ನಿವೃತ್ತರಾದ ಅವರು ತಮ್ಮ ಅನುಭವ ಸಂಪತ್ತನ್ನು ವ್ಯರ್ಥ ಗೊಳಿಸಲು ಇಚ್ಛಿಸಲಿಲ್ಲ.ಬದಲಾಗಿ ನಿವೃತ್ತಿಯ ದಿನಗಳನ್ನು ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಸಾರ್ಥಕಗೊಳಿಸಬೇಕೆಂದು ಬಯಸಿದರು.

ಕೆ.ಆರ್.ಮಾರ್ಕೆಟಿನ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿಯೂ ಎರಡು ಅವಧಿಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ ಕಚೇರಿ ಸಹಕಾರ ಸಂಘವನ್ನು ಸೇರಿ 15 ವರ್ಷ ನಿರ್ದೇಶಕರಾಗಿ

ಎರಡು ಅವಧಿಗಳಿಗೆ ಅಧ್ಯಕ್ಷರಾಗಿ ಸಂಸ್ಥೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದರು.

S11.jpeg

ಈ ಮಧ್ಯೆ ಸಹಕಾರ ರತ್ನ ಶ್ರೀ ಲಕ್ಕೇಗೌಡರು ಸಂಪರ್ಕಕ್ಕೆ ಬಂದರು. ಶಿವಸ್ವಾಮಿಯವರು ಲಕ್ಕೇಗೌಡರೊಂದಿಗೆ ಸೇರಿ ಕರ್ನಾಟಕ ಸ್ಟೇಟ್ ಕ್ರೆಡಿಟ್ ಕೊಆಪರೇಟಿವ್ ಸೊಸೈಟೀಸ್ ಫೆಡರೇಶನ್ ಸ್ಥಾಪಿಸುವ ಮೂಲಕ ಅದರ ಸಂಸ್ಥಾಪಕ ನಿರ್ದೇಶಕರಾಗಿ ಹತ್ತು ವರ್ಷ ಸೇವೆಸಲ್ಲಿಸಿದರು.

ಸಹಕಾರ ರತ್ನ ಶ್ರೀ ಬಸವೇಶ್ವರ, ಶ್ರೀ ಜಯರಾಮಯ್ಯ ಮತ್ತು ಶ್ರೀ ಶಶಿಧರ ಎಲೆ ಮತ್ತಿತರರ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರಗತಿಪರ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಸಮರ್ಥ ಸೇವೆ ಸಲ್ಲಿಸಿದ ಮಹನೀಯರಿವರು.

S10.jpeg

ಈ ವೇಳೆ ಕೌಟಿಲ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಕರೆ ಬಂದಾಗ ಅದರ ನಿರ್ದೇಶಕರಾಗಿ ಸೇರಿದ ಶಿವಸ್ವಾಮಿಯವರು ಬಳಿಕ ಅದರ ಅಧ್ಯಕ್ಷರಾದರು.

ಹೀಗೆ ಸರಕಾರದ ಇಲಾಖೆಯಲ್ಲೂ, ವಿವಿಧ ಸಹಕಾರ ಸಂಸ್ಥೆಗಳ ಬೇರೆ ಬೇರೆ ಹುದ್ದೆಗಳಲ್ಲಿ ಇರುವಾಗಲೂ ತಮ್ಮ ಬಳಿ ಸಹಾಯ ಸಹಕಾರ ಮಾರ್ಗದರ್ಶನ ಕೋರಿಬಂದವರಿಗೆ ಸೂಕ್ತ ಸಲಹೆ ಮತ್ತು ಎಲ್ಲ ರೀತಿಯ ಸಹಕಾರಗಳನ್ನು ನೀಡಿ ಅನೇಕರಿಗೆ ದಾರಿದೀಪವಾದವರು ಶಿವಸ್ವಾಮಿಯವರು.

S5.jpeg

ಹಾಗೆಂದು ಕೇವಲ ಸಹಕಾರ ಕ್ಷೇತ್ರಕ್ಕೆ ಸೀಮಿತವಾಗಿ ಉಳಿದವರಲ್ಲ ಶಿವಸ್ವಾಮಿಯವರು

ರಾಜಕೀಯ ಕ್ಷೇತ್ರಕ್ಕೂ ಸೇವೆ ಸಲ್ಲಿಸುವ ಉದ್ದೇಶದಿಂದ

ಭಾರತೀಯ ಜನತಾಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ಶಿವಸ್ವಾಮಿಯವರು ಬೆಂಗಳೂರಿನ ವಿದ್ಯಾಪೀಠ ವಾರ್ಡಿನ ಬಿಜೆಪಿ ಅಧ್ಯಕ್ಷರಾಗಿ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಪಕ್ಷಕ್ಕೆ ಮತ್ತು ಜನತೆಗೆ ಸೇವೆ ಸಲ್ಲಿಸಿದರು.

S1.jpeg

ನಿವೃತ್ತ ಅಧಿಕಾರಿಗಳ ಸಂಘದ ಪ್ರಧಾನ ಸಂಘಟಕರಾಗಿ ಸೇವೆಸಲ್ಲಿಸಿದ ಶಿವಸ್ವಾಮಿಯವರು ರಾಜಕೀಯ ಬದುಕಿನಲ್ಲೂ ತಮ್ಮದೇ ಛಾಪೊತ್ತಿದರು.

ಶಿವಸ್ವಾಮಿಯವರ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಬೆಂಗಾವಲಾಗಿದ್ದು ಸೂಕ್ತ ಸಂದರ್ಭದಲ್ಲಿ ಅಗತ್ಯ ಸಲಹೆಸೂಚನೆಗಳನ್ನು ನೀಡುತ್ತಾ ಯಶಸ್ಸಿನ ಸಂಗಾತಿಯಾದವರು ಅವರ ಧರ್ಮಪತ್ನಿ ಶ್ರೀಮತಿ ವಿಮಲಾ ಶಿವಸ್ವಾಮಿಯವರು.

ಪುತ್ರ ಶ್ರೀ ವಿನಯ್ ಇಂಜಿನಿಯರ್ ಆಗಿದ್ದವರು ಕೆಲವರ್ಷ ಹಿಂದೆಯೇ ಕೃಷಿಕ್ಷೇತ್ರದತ್ತ ಆಕರ್ಷಿತರಾಗಿ ಕನಕಪುರ ಬಳಿ ಭೂಮಿ ಖರೀದಿಸಿ ವ್ಯವಸಾಯ ಮಾಡುತ್ತಾ ಮಣ್ಣಿನ ಮಗನೆನಿಸಿದ್ದಾರೆ. ಸೊಸೆ ನವೀನಶ್ರೀ ಸಾಫ್ಟ್ವೇರ್ ಇಂಜಿನಿಯರ್.

ಪುತ್ರಿ ಸೌಮ್ಯಾ ಉನ್ನತ ಶಿಕ್ಷಣ ಪಡೆದು ಕೆನಡಾ ದೇಶದಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದಾರೆ.

S7.jpeg

ಮೊಮ್ಮಕ್ಕಳೂ ವಿದ್ಯಾಭ್ಯಾಸ ನಿರತರಾಗಿದ್ದು ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುವುದು

ಶಿವಸ್ವಾಮಿಯವರ ನಾಯಕತ್ವದ ಗುಣ ಮೂರನೇ ತಲೆಮಾರಿನಲ್ಲೂ ಮುಂದುವರಿದಿರುವುದರ ಸಂಕೇತವಾಗಿದೆ.

ಹೀಗೆ ಹಳ್ಳಿಯಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಸ್ವಾಮಿಯವರಿಗೀಗ ಎಂಭತ್ತರ ಸಂಭ್ರಮ.

ಅವರಿಗೆ ಭಗವಂತನು ಸಮಾಜಕ್ಕೆ ಹೆಚ್ಚಿನ ಸೇವೆ ಸಲ್ಲಿಸಲು ಇನ್ನಷ್ಟು ಆಯುರಾರೋಗ್ಯ ಭಾಗ್ಯಗಳನ್ನು ನೀಡುವುದು ನೀಡಲೆಂಬ ಪ್ರಾರ್ಥನೆಯೊಂದಿಗೆ ಈ. ಪರಿಚಯ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸುತ್ತಿದ್ದೇವೆ

Comments

Leave a comment

Recommended Reading